ಬೆರಿಂಗ್ ಸಮುದ್ರ -
ಉತ್ತರ ಪೆಸಿಫಿಕ್ ಸಾಗರದ ಒಂದು ಭಾಗ.  ಈ ಸಮುದ್ರದ ಸುತ್ತಲೂ ಪೂರ್ವದಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದ ಅಲಾಸ್ಕ ಆಗ್ನೇಯ ಹಾಗೂ ದಕ್ಷಿಣದಲ್ಲಿ ಅಲೂಷನ್ ದ್ವೀಪಗಳು, ನೈಋತ್ಯದಲ್ಲಿ ಕಾಮ್‍ಚಟ್ಕ ಪರ್ಯಾಯ ದ್ವೀಪ, ಪಶ್ಚಿಮ ಹಾಗೂ ವಾಯುವ್ಯದಲ್ಲಿ ಸೈಬೀರಿಯಾ ಇವೆ.  ಬೆರಿಂಗ್ ಸಮುದ್ರವನ್ನೂ ಆರ್ಕಟಿಕ್ ಸಾಗರವನ್ನೂ ಬೆರಿಂಗ್ ಜಲಸಂಧಿ ಕೂಡಿಸುತ್ತದೆ.  ಅಲಾಸ್ಕ ಮತ್ತು ಸೈಬೀರಿಯಾ ಭೂಭಾಗಗಳ ಮಧ್ಯೆ ಸುಮಾರು 80 ಕಿಮೀ ಅಂತರವಿರುವ ಬೆರಿಂಗ್ ಖಾರಿಯಿಂದ ಏಷ್ಯಾ ಮತ್ತು ಅಮೆರಿಕಾ ಭೂ ಭಾಗಗಳು ಬೇರ್ಪಟ್ಟಿವೆ.  ಬೆರಿಂಗ್ ಸಮುದ್ರದ ಗರಿಷ್ಠ ಆಳ 4,091 ಮೀ, ಪರಮಾವಧಿ ಅಗಲ ಪೂರ್ವಪಶ್ಚಿಮವಾಗಿ ಸುಮಾರು 1930 ಕಿಮೀ.  ಉದ್ದ 1530 ಕಿಮೀ.  ಈ ಸಮುದ್ರವನ್ನು ಸೇರುವ ಯೂಕಾನ್ ನದಿ ಕೆನಡದಿಂದ ಅಲಾಸ್ಕ ಮೂಲಕ ಹರಿದುಬರುತ್ತದೆ.  

	ಬೆರಿಂಗ್ ಸಮುದ್ರ ಮತ್ತು ಇಂಗ್ಲೆಂಡ್ ಇವೆರಡೂ ಒಂದೇ ಅಕ್ಷಾಂಶದಲ್ಲಿದ್ದರೂ ಈ ಸಮುದ್ರದ ವಾಯುಗುಣ ಹೆಚ್ಚು ತೀವ್ರ; ಇದರ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಬೇಸಿಗೆಯಲ್ಲಿ ಮಳೆಯಾಗುತ್ತದೆ.  ವಾಯುಗುಣ ತಂಪಾಗಿರುತ್ತದೆ.  ಚಳಿಗಾಲದಲ್ಲಿ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಚಳಿ ಹೆಚ್ಚು.  ಆಗ ಚಂಡಮಾರುತಗಳು ಬೀಸುತ್ತವೆ.  ಇವುಗಳಿಂದ ಸಮುದ್ರದಲ್ಲಿ 12 ಮೀ ಗಳಿಗೂ ಹೆಚ್ಚು ಎತ್ತರಕ್ಕೆ ಅಲೆಗಳು ಏಳುತ್ತವೆ.  ಸಮುದ್ರದ ದಕ್ಷಿಣದಲ್ಲಿ ಸರಾಸರಿ ವಾರ್ಷಿಕ ಮಳೆ 1,000 ಮಿಮೀ, ಉತ್ತರದಲ್ಲಿ ಸುಮಾರು 500 ಮಿಮೀ. ಮಂಜು, ಮಳೆ, ತೇಲುವ ಹಿಮಗೆಡ್ಡೆ, ಇವುಗಳಿಂದಾಗಿ ಬೆರಿಂಗ್ ಸಮುದ್ರದ ಉತ್ತರ ಭಾಗದಲ್ಲಿ ನೌಕಾಯಾನ ಕಷ್ಟಕರ.  ಚಳಿಗಾಲದಲ್ಲಿ ಸಮುದ್ರದ ಉತ್ತರ ಭಾಗ ಹೆಪ್ಪುಗಟ್ಟಿ ಮಂಜಿನ ಬಯಲಾಗಿ ಪರಿಣಮಿಸುತ್ತದೆ.  

	ಬೆರಿಂಗ್ ಸಮುದ್ರ ಮತ್ತು ಜಲಸಂಧಿಯಲ್ಲಿ ಅನೇಕ ದ್ವೀಪಗಳುಂಟು.  ಅವುಗಳಲ್ಲಿ ಅಲೂಷನ್ ದೀಪಗಳು, ನೂನವಾಕ್, ಸೇಂಟ್ ಲಾರೆನ್ಸ್, ಕರಾಗಿನ್ಸ್, ನಲ್ಸನ್ ಮತ್ತು ಕಮ್ಯಾಂಡರ್ ಅಥವಾ ಕಾಮಂಡಾರ್‍ಸ್ಕಿಯ ದ್ವೀಪಗಳು ದೊಡ್ಡವು. 

	ಬೆರಿಂಗ್ ಸಮುದ್ರದ ಪರಿಶೋಧನೆ 18ನೆಯ ಶತಮಾನದಿಂದ ನಡೆದಿದೆ.  ರಷ್ಯದ ಪೀಟರ್ ಚಕ್ರವರ್ತಿಯ ಸೇವೆಯಲ್ಲಿದ್ದ ಡೆನ್‍ಮಾರ್ಕ್ ದೇಶದ ನಾವಿಕ ವೀಟುಸ್ ಬೆರಿಂಗ್ 1728 ಮತ್ತು 1741ರಲ್ಲಿ ಬೆರಿಂಗ್ ಸಮುದ್ರವನ್ನೂ ಬೆರಿಂಗ್ ಜಲಸಂಧಿಯನ್ನೂ ಪರಿಶೋಧಿಸಿದ್ದರಿಂದ ಆತನ ಹೆಸರನ್ನೇ ಇಡಲಾಗಿದೆ.  
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ